ಬಿಲಾಸಪುರ: ದೇಶದ ಸಂವಿಧಾನದ 21ನೆಯ ವಿಧಿಯು ಘನತೆಯ ಜೀವನವನ್ನು ಮೂಲಭೂತ ಹಕ್ಕನ್ನಾಗಿ ನೀಡಿದೆ. ಹೀಗಾಗಿ, ಮಹಿಳೆಯು ಕನ್ಯತ್ವ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಒತ್ತಾಯ ಮಾಡುವಂತಿಲ್ಲ ಎಂದು ಛತ್ತೀಸಗಢ ಹೈಕೋರ್ಟ್ ಹೇಳಿದೆ.
ಸಂವಿಧಾನದ 21ನೆಯ ವಿಧಿಯು ಮೂಲಭೂತ ಹಕ್ಕುಗಳ ಹೃದಯ ಇದ್ದಂತೆ ಎಂದು ಹೇಳಿರುವ ಹೈಕೋರ್ಟ್, ಕನ್ಯತ್ವ ಪರೀಕ್ಷೆಗೆ ಅನುಮತಿ ನೀಡುವುದು ಮಹಿಳೆಯ 'ಮೂಲಭೂತ ಹಕ್ಕುಗಳಿಗೆ, ಸಹಜ ನ್ಯಾಯದ ಮೂಲಭೂತ ತತ್ವಗಳಿಗೆ' ವಿರುದ್ಧ ಎಂದು ಸ್ಪಷ್ಟಪಡಿಸಿದೆ.
ತನ್ನ ಪತ್ನಿಯು ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ, ಆಕೆಯ ಕನ್ಯತ್ವ ಪರೀಕ್ಷೆಗೆ ಆದೇಶಿಸಬೇಕು ಎಂದು ಪತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ವರ್ಮ ತಮ್ಮ ಆದೇಶದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ಪತಿಯು ನಪುಂಸಕ ಎಂದು ದೂರಿದ್ದ ಪತ್ನಿ, ಆತನ ಜೊತೆ ವೈವಾಹಿಕ ಜೀವನ ನಡೆಸಲು ನಿರಾಕರಿಸಿದ್ದಳು. ನಪುಂಸಕ ಎಂಬ ಆರೋಪವನ್ನು ಅಲ್ಲಗಳೆಯಬೇಕು ಎಂದಾದರೆ ಅರ್ಜಿದಾರ ಪತಿಯು ಸಂಬಂಧಪಟ್ಟ ವೈದ್ಯಕೀಯ ಪರೀಕ್ಷೆಗೆ ಗುರಿಯಾಗಬಹುದು ಅಥವಾ ಬೇರೆ ಯಾವುದಾದರೂ ಸಾಕ್ಷ್ಯ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ. ಆದೇಶವನ್ನು ಜನವರಿ 9ರಂದು ನೀಡಲಾಗಿದ್ದು, ಈಚೆಗೆ ಅದನ್ನು ಸಾರ್ವಜನಿಕರಿಗೆ ಲಭ್ಯವಾಗಿಸಲಾಗಿದೆ.
ಪತ್ನಿಯನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸಬೇಕು ಎಂದು ಪತಿ ಕೋರಿರುವುದು ಅಸಾಂವಿಧಾನಿಕ ಎಂದು ಕೋರ್ಟ್ ಹೇಳಿದೆ. 'ಸಂವಿಧಾನದ 21ನೆಯ ವಿಧಿಯು ಬದುಕಿನ ಸ್ವಾತಂತ್ರ್ಯವನ್ನು ಮಾತ್ರವೇ ನೀಡುವುದಿಲ್ಲ. ಅದು ಘನತೆಯಿಂದ ಬದುಕುವ ಹಕ್ಕನ್ನೂ ನೀಡುತ್ತದೆ. ಇದು ಮಹಿಳೆಯರ ಪಾಲಿಗೆ ಬಹಳ ಮಹತ್ವದ್ದು' ಎಂದು ಆದೇಶದಲ್ಲಿ ಹೇಳಲಾಗಿದೆ.