ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಐತಿಹಾಸಿಕ ಚಾರ್‌ಮಿನಾರ್‌ನ ಆಲಂಕಾರಿಕ ಭಾಗವು ಕುಸಿದಿದೆ.
ಚಾರ್‌ಮಿನಾರ್‌ನ ಈಶಾನ್ಯ ಭಾಗದ ಕಟ್ಟಡದ ಎರಡನೇ ಹಂತದಲ್ಲಿ ಕಲ್ಲಿನ ಕೆತ್ತನೆಯ ಆಲಂಕಾರಿಕ ಭಾಗವು ಕುಸಿದಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
'ನಗರದಲ್ಲಿ ಸುರಿದ ಭಾರೀ ಮಳೆಯಿಂದ ಈ ಘಟನೆ ಸಂಭವಿಸಿದೆ. ಆದರೆ ಇದು ಅಂಥ ದೊಡ್ಡ ಹಾನಿಯಲ್ಲ. ಹಾನಿಗೀಡಾದ ಭಾಗವನ್ನು ತಜ್ಞರು ಪರಿಶೀಲಿಸಿದ್ದಾರೆ. ಎಂಜಿನಿಯರ್‌ಗಳ ಸಮ್ಮುಖದಲ್ಲಿ ಶುಕ್ರವಾರ ಬೆಳಿಗ್ಗೆ ಸಭೆ ನಡೆಸಿ ದುರಸ್ತಿ ಕಾರ್ಯದ ಯೋಜನೆ ರೂಪಿಸಲಾಗುವುದು' ಎಂದಿದ್ದಾರೆ.
ಚಾರ್‌ಮಿನಾರ್ ಅನ್ನು 1591ರಲ್ಲಿ ಸುಲ್ತಾನ್ ಮೊಹಮ್ಮದ್ ಖುಲಿ ಖುತುಬ್ ಶಾ ನಿರ್ಮಿಸಿದ್ದರು. ಭಾರೀ ಮಳೆಯಿಂದಾಗಿ ನಗರದ ಹಲವು ಭಾಗಗಳು ಜಲಾವೃತಗೊಂಡಿವೆ.