ಇಂಫಾಲ್: ಕೇಂದ್ರ ಸರ್ಕಾರವು ದೆಹಲಿಯಲ್ಲಿ ಶನಿವಾರ ಕರೆದಿದ್ದ ಮೈತೇಯಿ ಮತ್ತು ಕುಕಿ ಸಮುದಾಯ ಸಂಘಟನೆಗಳ ಸಭೆ ಮಣಿಪುರದ ಜನಾಂಗೀಯ ಸಂಘರ್ಷಗಳ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಮತ್ತೊಂದು ತೋರಿಕೆಯ ಸಭೆಯಾಯಿತು ಎಂದು ಇಂಫಾಲ್ ಕಣಿವೆಯ ಹಲವು ನಾಗರಿಕ ಸಮಾಜ ಸಂಘಟನೆಗಳ ಒಕ್ಕೂಟವಾದ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (ಸಿಒಸಿಒಎಂಐ-ಕೊಕೊಮಿ) ಟೀಕಿಸಿದೆ.
ಆಲ್ ಮಣಿಪುರ ಯುನೈಟೆಡ್ ಕ್ಲಬ್ಸ್ ಆರ್ಗನೈಸೇಶನ್ ಮತ್ತು ಫೆಡರೇಶನ್ ಆಫ್ ಸಿವಿಲ್ ಸೊಸೈಟಿ ಆರ್ಗನೈಸೇಶನ್ಸ್‌ನ ಪ್ರತಿನಿಧಿಗಳನ್ನು ಒಳಗೊಂಡ ಆರು ಸದಸ್ಯರ ಮೈತೇಯಿ ನಿಯೋಗ ಮತ್ತು ಒಂಬತ್ತು ಪ್ರತಿನಿಧಿಗಳಿದ್ದ ಕುಕಿ ನಿಯೋಗ ಈ ಸಭೆಯಲ್ಲಿ ಭಾಗಿಯಾಗಿದ್ದವು.
ದೆಹಲಿಯಲ್ಲಿ ಸಭೆ ನಡೆದ ದಿನವೇ ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಕೊಕೊಮಿ, ಸಭೆಯನ್ನು ತರಾತುರಿಯಲ್ಲಿ ಕರೆದಿದ್ದು, ಎರಡೂ ಕಡೆಯ ಬೆರಳೆಣಿಕೆಯಷ್ಟು ವ್ಯಕ್ತಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರವು ಈ ಬಿಕ್ಕಟ್ಟಿನ ಮೂಲ ಕಾರಣಗಳನ್ನು ಪತ್ತೆ ಮಾಡಿ, ಆ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಪ್ರಾಮಾಣಿಕ ಅಥವಾ ವಾಸ್ತವಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಪದೇ ಪದೇ ತೋರಿಕೆಯ ಸಭೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.
ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಯನ್ನು ದೃಢೀಕರಿಸುವ 'ತಂತ್ರ'ದ ಸಭೆಯಾಗಿದ್ದರಿಂದ ಅದರಲ್ಲಿ ಭಾಗವಹಿಸಲಿಲ್ಲ ಎಂದು ಮೈತೇಯಿಯ ಒಂದು ಗುಂಪು ಹೇಳಿದೆ.
ಲೋಕಸಭೆಯಲ್ಲಿ ಗುರುವಾರ ಮಣಿಪುರದ ಕುರಿತ ಚರ್ಚೆ ವೇಳೆ, ಗೃಹ ಸಚಿವಾಲಯವು ಮೈತೇಯಿ ಮತ್ತು ಕುಕಿ ಸಮುದಾಯಗಳ ವಿವಿಧ ಸಂಘಟನೆಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಾಗಿದೆ. ಅಲ್ಲದೆ, ಜಂಟಿ ಸಭೆಯನ್ನು ಕರೆಯಲಿದೆ ಎಂದು ಶಾ ಹೇಳಿದ್ದರು.