ಬದಿಯಡ್ಕ: ಕರ್ನಾಟಕ ಸಿಇಟಿ ಪರೀಕ್ಷೆಯ ಸಂದರ್ಭ ಕೆಲವು ಪರೀಕ್ಷಾಕೇಂದ್ರಗಳಲ್ಲಿ ಜನಿವಾರ ಧರಿಸಿದ ಕೆಲ ವಿದ್ಯಾರ್ಥಿಗಳಿಗೆ ಅವಮಾನಕರವಾಗಿ ವರ್ತಿಸಿರುವುದು ಅತ್ಯಂತ ಖೇದಕರ ವಿಚಾರವಾಗಿದೆ. ಕಷ್ಟಪಟ್ಟು ಪರೀಕ್ಷೆಗೆ ಸಿದ್ಧವಾಗಿದ್ದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ತೀವ್ರತರವಾದ ಆಘಾತವನ್ನು ನೀಡಿದ ಘಟನೆಯನ್ನು ಮುಳ್ಳೇರಿಯ ಹವ್ಯಕ ಮಂಡಲವು ಪ್ರಬಲವಾಗಿ ಖಂಡಿಸುತ್ತದೆ. ಉದ್ಧಟ, ಅಮಾನವೀಯ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳ ಮನೋಬಲವನ್ನು ಕುಗ್ಗಿಸುವಲ್ಲಿ ಕಾರಣರಾದ ಅಧಿಕಾರಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರಗಿಸಿ ಅವರಿಗೆ ಸೂಕ್ತ ಶಿಕ್ಷೆಯನ್ನೇ ನೀಡಬೇಕು ಎಂದು ಮಂಡಲ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ತಿಳಿಸಿದ್ದಾರೆ. ಜನಿವಾರ ಎಂಬುದು ಕೇವಲ ದಾರವಲ್ಲ, ನಮ್ಮ ಅಸ್ಮಿತೆ ಹಾಗೂ ಅಸ್ತಿತ್ವ ಆಗಿದೆ. ಧಾರ್ಮಿಕ ನಂಬಿಕೆಯಾಗಿದೆ. ಮುಗ್ದ ವಿದ್ಯಾರ್ಥಿಗಳನ್ನು ಸರಕಾರೀ ಅಧಿಕಾರಿಗಳು ಶೋಷಣೆ ಮಾಡಿರುವುದು ಖಂಡನಾರ್ಹ. ಇಂತಹ ಕ್ರಮಗಳನ್ನು ಮುಳ್ಳೇರಿಯ ಹವ್ಯಕ ಮಂಡಲವು ಒಗ್ಗಟ್ಟಿನಿಂದ ಖಂಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.