ತಿರುವನಂತಪುರ: ಕೇರಳದ ಇರಿಂಜಲಕುಡದಲ್ಲಿರುವ ಶ್ರೀ ಕೂಡಲ್ಮಾಣಿಕ್ಯಂ ದೇವಾಲಯದ 'ಕಳಕಮ್' (ಹೂವಿನ ಹಾರ ತಯಾರಿಕೆ ಮತ್ತು ಸಂಬಂಧಿತ ಕೆಲಸಗಳು) ಹುದ್ದೆಗೆ ನೇಮಕಗೊಂಡ ನಂತರ ಎದುರಿಸಿದ ಜಾತಿ ತಾರತಮ್ಯದಿಂದಾಗಿ ಹಿಂದೂ-ಎಳವ ಸಮುದಾಯದ ಯುವ ನೌಕರರೊಬ್ಬರು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತಿರುವನಂತಪುರಂ ಮೂಲದ ಬಿ.ಎ. ಬಾಲು ಎಂಬವರು ರಾಜೀನಾಮೆ ನೀಡಲು ವೈಯಕ್ತಿಕ ಸಮಸ್ಯೆಗಳು ಕಾರಣವೆಂದು ಉಲ್ಲೇಖಿಸಿದ್ದರೂ ದೇವಾಲಯದ ತಂತ್ರಿಗಳು ಜಾತಿ ತಾರತಮ್ಯ ಮಾಡಿದ್ದಾರೆಂಬ ಆರೋಪವೇ ಇದಕ್ಕೆ ಕಾರಣ ಎಂದು ನಂಬಲಾಗಿದೆ.
ಕೇರಳ ದೇವಸ್ವಂ ನೇಮಕಾತಿ ಮಂಡಳಿಯ (ಕೆಡಿಆರ್‌ಬಿ) ಪ್ರಕಾರ, ಈ ಹುದ್ದೆಗೆ ಮುಂದಿನ ಅರ್ಹ ಅಭ್ಯರ್ಥಿಯೂ ಎಳವ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲು ಫೆಬ್ರುವರಿ 24 ರಂದು 'ಕಳಕಮ್' ಕೆಲಸಕ್ಕೆ ಸೇರಿದ ನಂತರ, ವಾರಿಯರ್‌ನಂತಹ ಮೇಲ್ಜಾತಿಯ ಸಮುದಾಯಗಳಿಗೆ ಸೇರಿದವರನ್ನು ಮಾತ್ರ 'ಕಳಕಮ್' ಆಗಿ ನೇಮಿಸಬೇಕು ಎಂದು ಹೇಳಿ ದೇವಾಲಯಕ್ಕೆ ಸಂಬಂಧಿಸಿದ ಆರು ತಂತ್ರಿ ಕುಟುಂಬಗಳ ಸದಸ್ಯರು ದೇವಾಲಯದಲ್ಲಿ ಪೂಜೆ ಸ್ಥಗಿತಗೊಳಿಸಿದ್ದರು.
ತಂತ್ರಿಗಳ ಒತ್ತಡಕ್ಕೆ ಮಣಿದು, ಕೂಡಲ್ಮಾಣಿಕ್ಯಂ ದೇವಸ್ವಂ ಅಧಿಕಾರಿಗಳು ಬಾಲು ಅವರನ್ನು ತಾತ್ಕಾಲಿಕವಾಗಿ ಕಚೇರಿ ಕೆಲಸಕ್ಕೆ ನಿಯೋಜಿಸಿ, ಮೇಲ್ಜಾತಿಯ ಇನ್ನೊಬ್ಬರನ್ನು 'ಕಳಕಮ್' ಆಗಿ ನೇಮಿಸಿದ್ದರು. ಆದಾಗ್ಯೂ ಇದು ವಿವಾದಕ್ಕೆ ತಿರುಗುತ್ತಿದ್ದಂತೆ, ಒಬಿಸಿ ಸಮುದಾಯದ ಉದ್ಯೋಗಿಯನ್ನು ಮತ್ತೆ 'ಕಳಕಮ್' ಆಗಿ ನಿಯೋಜಿಸಲಾಗುವುದು. ಪೂಜೆ ನಿಲ್ಲಿಸುವ ತಂತ್ರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ವಂ ಅಧಿಕಾರಿಗಳು ಹೇಳಿದ್ದರು.
ಆದರೆ ಮಾರ್ಚ್ 31ರವರೆಗೆ ರಜೆಯಲ್ಲಿದ್ದ ಬಾಲು ಮಂಗಳವಾರ (ಏ.1) ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಬಾಲು ರಾಜೀನಾಮೆ ನೀಡಿದ್ದರಿಂದ ತಾರತಮ್ಯದ ಆರೋಪದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ದೇವಸ್ವಂ ಮಂಡಳಿಯ ಸದಸ್ಯ ಕೆ.ಜಿ. ಅಜಯ್‌ಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.