ಲಕ್ನೋ: ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಪೋಸ್ಟ್ ಗೆ ಲೈಕ್ (ಮೆಚ್ಚುಗೆ) ಕೊಟ್ಟಲ್ಲಿ, ಅದು ಆ ಪೋಸ್ಟ್ ಆನ್ನು ಪ್ರಕಟಿಸಿದಂತೆ ಅಥವಾ ಪ್ರಸಾರ ಮಾಡಿದಂತೆ ಆಗುವುದಿಲ್ಲ ಹಾಗೂ 'ಅಶ್ಲೀಲ' ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಾನೂನಿನಡಿ ನೀಡಲಾಗು ಶಿಕ್ಷೆಯ ವ್ಯಾಪ್ತಿ ಬರುವುದಿಲ್ಲವೆಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
'ಅಶ್ಲೀಲ' ವಿಷಯವನ್ನು ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪ್ರಸಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರಡಿ ಮೊಕದ್ದಮೆ ದಾಖಲಿಸಲ್ಪಟ್ಟ ಇಮ್ರಾನ್ ಖಾನ್ ಎಂಬಾತ ಆರೋಪಿಯಾಗಿರುವ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಮರ್ತಿ ಸೌರಭ್ ಶ್ರೀವಾತ್ಸವ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಗ್ರಾ ಜಿಲ್ಲಾಧಿಕಾರಿಗಳ ಕಚೇರಿಯೆದುರು ನಡೆಯಲಿದ್ದ ಪ್ರತಿಭಟನಾ ಸಭೆಯನ್ನು ಪ್ರಸ್ತಾವಿಸಿ ಚೌಧುರಿ ಫರ್ಹಾನ್ ಉಸ್ಮಾನ್ ಎಂಬಾತ ಫೇಸ್ ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಗೆ ಇಮ್ರಾನ್ ಖಾನ್ ಲೈಕ್ ಕೊಟ್ಟಿದ್ದನು.
ಇಮ್ರಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಕೆಲವು ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದರಿಂದಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ 600-700 ವ್ಯಕ್ತಿಗಳು ಜಮಾವಣೆಗೊಳ್ಳುವುದಕ್ಕೆ ಹಾಗೂ ಅನುಮತಿ ಪಡೆಯದೆಯೇ ಅವರು ಮೆರವಣಿಗೆಯನ್ನು ನಡೆಸುವುದಕ್ಕೆ ಕಾರಣವಾಯಿತೆಂಬ ಆರೋಪವನ್ನು ಖಾನ್ ವಿರುದ್ಧ ಹೊರಿಸಲಾಗಿತ್ತು.
ಇಮ್ರಾನ್ ಕೃತ್ಯವು ಶಾಂತಿ, ಸುವ್ಯವಸ್ಥೆಗೆ ಒಡ್ಡಿದ ಬೆದರಿಕೆಯೆಂದು ಪೊಲೀಸರು ಆಪಾದಿಸಿದ್ದಾರೆ. ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲದೆ, ಗಲಭೆ ಹಾಗೂ ಕಾನೂನುಬಾಹಿರ ಜಮಾವಣೆಗೆ ಸಂಬಂಧಿಸಿದ ಭಾರತೀಯದಂಡಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ ಇಮ್ರಾನ್ ಖಾನ್ ಮೇಲಿನ ಆರೋಪವನ್ನು ಆತನ ವಕೀಲರು ನಿರಾಕರಿಸಿದ್ದಾರೆ. ಅಂತಹ ಯಾವುದೇ ವಿಷಯ ಆತನ ಫೇಸ್ಬುಕ್ ಖಾತೆಯಲ್ಲಿ ಕಂಡುಬಂದಿಲ್ಲವೆಂದು ಹೇಳಿದ್ದಾರೆ. ಆದರೆ ಅದಕ್ಕೊಪ್ಪದ ಪ್ರಾಸಿಕ್ಯೂಶನ್, ವಿವಾದಿತ ಪೋಸ್ಟ್ ಗಳನ್ನು ಖಾನ್ ಫೇಸ್ ಬುಕ್ ನಲ್ಲಿ ಆಳಿಸಿಹಾಕಿದ್ದರಾದರೂ, ಅವು ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣವೇದಿಕೆಗಳಲ್ಲಿ ಲಭ್ಯವಿದೆಯೆಂದು ಹೇಳಿದೆ.
ಇತ್ತಂಡಗಳ ವಾದವನ್ನು ಆಲಿಸಿದ ನ್ಯಾಯಾಧೀಶರು, ಪ್ರಶ್ನಾರ್ಹವಾದ ಪೋಸ್ಟ್ ಗೆ ಇಮ್ರಾನ್ ಲೈಕ್ ಮಾತ್ರ ಕೊಟ್ಟಿದ್ದಾರೆ. ಆದುದರಿಂದ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿ ಅಪರಾಧವೆಂಬುದಾಗಿ ಪರಿಗಣಿಸಲ್ಪಡುವುದಿಲ್ಲವೆಂದು ನ್ಯಾಯಾಧೀಶರು ಹೇಳಿದ್ದಾರೆ.