ಲಂಡನ್: ಕನ್ನಡದ ಹೆಸರಾಂತ ಸಾಹಿತಿ ಬಾನು ಮುಷ್ತಾಕ್ ಅವರ ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್', ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಇನ್ನಷ್ಟು ಹತ್ತಿರವಾಗಿದ್ದು, 'ಶಾರ್ಟ್ ಲಿಸ್ಟ್'ನಲ್ಲಿ ಸ್ಥಾನ ಪಡೆದಿದೆ.
ದೀಪಾ ಭಸ್ತಿ ಅವರು ಬಾನು ಅವರ ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ಇದೇ ಮೊದಲ ಬಾರಿಗೆ ಕನ್ನಡದ ಕಥೆಗಾರ್ತಿಯೊಬ್ಬರ ಕೃತಿಯು ಪ್ರತಿಷ್ಠಿತ ಈ ಪ್ರಶಸ್ತಿಯ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನು ಈ ಸಂಕಲನ ಒಳಗೊಂಡಿದೆ. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ.
ತಮ್ಮ ಕೃತಿಯು ಪ್ರಶಸ್ತಿಯ 'ಲಾಂಗ್ ಲಿಸ್ಟ್'ಗೆ ಆಯ್ಕೆಗೊಂಡ ಸಂದರ್ಭದಲ್ಲಿ 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ್ದ ಬಾನು ಮುಷ್ತಾಕ್ ಅವರು, 'ಆಯಾ ಕಾಲಘಟ್ಟದ ಸವಾಲುಗಳು, ಮಹಿಳೆಯರ ಮೇಲೆ ಬೀರಬಹುದಾದ ಪರಿಣಾಮ, ಸಮಾಜದ ಶೋಷಕ ನಿಲುವು, ಪುರುಷ ಪ್ರಾಧಾನ್ಯದ ಆಕ್ರಮಣ, ಅದನ್ನು ಮೀರುವ ಹೆಣ್ಣು ಮಕ್ಕಳ ಪ್ರಯತ್ನ ಎಲ್ಲವೂ ಈ ಕೃತಿಯಲ್ಲಿ ಭಿನ್ನವಾಗಿ ಸೇರಿಕೊಂಡಿವೆ' ಎಂದು ಪ್ರತಿಕ್ರಿಯಿಸಿದ್ದರು.
ಫ್ರೆಂಚ್‌ನಿಂದ ಅನುವಾದಿತ ಎರಡು ಕೃತಿಗಳು, ಜಪಾನ್, ಇಟಾಲಿಯನ್ ಹಾಗೂ ಡ್ಯಾನಿಷ್ ಭಾಷೆಯ ತಲಾ ಒಂದು ಕೃತಿ 'ಶಾರ್ಟ್ ಲಿಸ್ಟ್'ನಲ್ಲಿವೆ.
ಪ್ರಶಸ್ತಿಯ ಮೊತ್ತ 50 ಸಾವಿರ ಪೌಂಡ್ (₹55 ಲಕ್ಷಕ್ಕೂ ಹೆಚ್ಚು) ಇದೆ.