ರಾಮಗಢ: 'ವಿದ್ಯುನ್ಮಾನ ಮತಯಂತ್ರಗಳು (EVMs) ಸುರಕ್ಷಿತ ಮತ್ತು ತಿರುಚುವುದು ಅಸಾಧ್ಯ' ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಭಾರತದಲ್ಲಿ ಬಳಕೆಯಲ್ಲಿರುವ ವಿದ್ಯುನ್ಮಾನ ಮತಯಂತ್ರಗಳಿಗೆ ಅಂತರ್ಜಾಲ, ಬ್ಲೂಟೂತ್ ಅಥವಾ ಇನ್‌ಫ್ರಾರೆಡ್ ಸಂಪರ್ಕ ಅಸಾಧ್ಯ.
ಹೀಗಾಗಿ ತಿರುಚಲು ಸಾಧ್ಯವಿಲ್ಲ. ಈ ಕುರಿತು ವಿದ್ಯುನ್ಮಾನ ಮತಯಂತ್ರಗಳ ಕುರಿತು ಕಾನೂನು ಪರಿಶೀಲನೆಯೂ ನಡದಿದೆ' ಎಂದಿದ್ದಾರೆ.
ಜಾರ್ಖಂಡ್ ಪ್ರವಾಸದಲ್ಲಿರುವ ಜ್ಞಾನೇಶ್ ಕುಮಾರ್ ಅವರು ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಾಲ್ಗೊಂಡ 55 ಸ್ವಯಂಸೇವಕರೊಂದಿಗೆ ರಾಮಗಢದಲ್ಲಿ ಸಮಾಲೋಚನೆ ನಡೆಸಿದರು.
'ವಿದ್ಯುನ್ಮಾನ ಮತಯಂತ್ರಗಳು ಅಸುರಕ್ಷಿತ. ಮತಪತ್ರಗಳೇ ಹೆಚ್ಚು ಸುರಕ್ಷಿತ' ಎಂದು ಅಮೆರಿಕದ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬಾರ್ಡ್ ಅವರು ಹೇಳಿದ್ದು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್‌ಸಮರಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಜ್ಞಾನೇಶ್ ಕುಮಾರ್ ಅವರು ಈ ಹೇಳಿಕೆ ನೀಡಿದ್ದಾರೆ.