ಬೆಂಗಳೂರು: ಜಾಗತಿಕ ಟೆಕ್ ದೈತ್ಯ ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಇಂಟೆಲ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ (CTO) ಹಾಗೂ ಆ ಕಂಪನಿಯ ಕೃತಕ ಬುದ್ಧಿಮತ್ತೆ (AI) ವಿಭಾಗದ ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್ ಕಟ್ಟಿ ಅವರು ನೇಮಕವಾಗಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
Intel ಕಂಪನಿಯ ಸಿಇಒ ಲಿಪ್ ಬೂ ಟಾನ್ ಅವರು ಇಂಟೆಲ್ ಮೆಮೊ ಮೂಲಕ ಈ ವಿಷಯ ತಿಳಿಸಿದ್ದಾರೆ. ಇಂಟೆಲ್ ವೆಬ್‌ಸೈಟಿನಲ್ಲಿ ಸದ್ಯ ಸಚಿನ್ ಕಟ್ಟಿ ಅವರು ಹಿರಿಯ ಉಪಾಧ್ಯಕ್ಷ ಜನರಲ್ ಮ್ಯಾನೇಜರ್ (ನೆಟ್‌ವರ್ಕ್ ಎಡ್ಜ್ ಗ್ರೂಪ್) ಎಂದು ಬರೆಯಲಾಗಿದೆ.
55 ವರ್ಷದ ಸಚಿನ್ ಕಟ್ಟಿ ಅವರು ಬೆಳಗಾವಿ ಮೂಲದವರಾಗಿದ್ದು ಅವರು ತಮ್ಮ ಹೈಸ್ಕೂಲ್ ಶಿಕ್ಷಣದವರೆಗೆ (ಸೇಂಟ್ ಝೇವಿಯರ್ ಹೈಸ್ಕೂಲ್) ಬೆಳಗಾವಿಯಲ್ಲಿ ಇದ್ದು ನಂತರ ಪಿಯುಸಿ ಹಾಗೂ ಉನ್ನತ ವ್ಯಾಸಂಗಕ್ಕೆ ಮುಂಬೈಗೆ ತೆರಳಿ ಐಐಟಿ ಬಾಂಬೆಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ನಂತರ ಮೆಸ್ಸಾಚುಯೇಟ್ಸ್ MIT ಯಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ ಎಂದು ಆಲ್ ಅಬೌಟ್ ಬೆಳಗಾವಿ ವೆಬ್‌ಸೈಟ್ ವರದಿ ಮಾಡಿದೆ.
ಸದ್ಯ ಸಚಿನ್ ಕಟ್ಟಿ ಅವರು ಅಮೆರಿಕದ ನಾಗರಿಕರಾಗಿ ಕ್ಯಾಲಿಫೊರ್ನಿಯಾ ರಾಜ್ಯದ ಸ್ಯ್ಟಾನ್‌ಫೊರ್ಡ್‌ನಲ್ಲಿ ನೆಲೆಸಿದ್ದಾರೆ.
ಇಂಟೆಲ್ ಕಂಪನಿಯ ವೆಬ್‌ಸೈಟ್ ಪ್ರಕಾರ ಸಚಿನ್ ಕಟ್ಟಿ ಅವರದ್ದು ಎಐ ವಿಭಾಗದಲ್ಲಿ ಗುರುತರ ಕೆಲಸ. ಅಲ್ಲದೇ ತಂತ್ರಜ್ಞಾನ ಲೋಕದಲ್ಲಿ ಸಚಿನ್ ಅವರು ಜಾಗತಿಕವಾಗಿ ಹೆಸರು ಮಾಡಿದ್ದಾರೆ.
ಸಚಿನ್ ಕಟ್ಟಿ ಅವರಿಗೆ ಶುಭಾಶಯ ಕೋರಿ ಅನೇಕ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.