ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಎರಡನೇ ಬಾರಿಗೆ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಈ ಸಂಬಂಧ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಉಪಗ್ರಹಗಳ ಎರಡನೇ ಡಾಕಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಹಂಚಿಕೊಳ್ಳಲು ಹರ್ಷಿಸುತ್ತೇನೆ ಎಂದು ತಿಳಿಸಿದ್ದಾರೆ.
ಮೊದಲೇ ತಿಳಿಸಿದಂತೆ, ಸ್ಪೇಡೆಕ್ಸ್ ಮಿಷನ್‌ನ ಪಿಎಸ್‌ಎಲ್‌ವಿ-ಸಿ60 ಅನ್ನು 2024ರ ಡಿಸೆಂಬರ್ 30ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ನಂತರ ಉಪಗ್ರಹಗಳನ್ನು ಮೊದಲ ಬಾರಿಗೆ 2025ರಂದು ಜನವರಿ 16ರಂದು ಬೆಳಿಗ್ಗೆ 6.20 ಕ್ಕೆ ಯಶಸ್ವಿಯಾಗಿ ಡಾಕ್ ಮಾಡಲಾಗಿತ್ತು. ಮಾರ್ಚ್ 13ರ ಬೆಳಿಗ್ಗೆ 09.20ಕ್ಕೆ ಯಶಸ್ವಿಯಾಗಿ ಅನ್‌ಡಾಕ್ ಮಾಡಲಾಗಿತ್ತು. ಮುಂದಿನ ಎರಡು ವಾರಗಳಲ್ಲಿ ಹೆಚ್ಚಿನ ಪ್ರಯೋಗಗಳನ್ನು ಯೋಜಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲಿ, ಸಾಮಾನ್ಯ ಮಿಷನ್ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್ ಉಡಾವಣೆಗಳು ಅಗತ್ಯವಿರುವಾಗ ಡಾಕಿಂಗ್ ತಂತ್ರಜ್ಞಾನವು ಅತ್ಯಗತ್ಯವಾಗಿರುತ್ತದೆ.
'ಸ್ಪೇಡೆಕ್ಸ್' ಯೋಜನೆಯ ಯಶಸ್ಸು ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಮುಂತಾದ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ಸಂಕೀರ್ಣ ತಂತ್ರಜ್ಞಾನಗಳಿಗೆ ದೇಶಕ್ಕೆ ನೆರವಾಗಲಿದೆ.