ಭಾರತವು ತನ್ನ ಅತ್ಯಂತ ಕುತೂಹಲಕಾರಿ ಬಾಹ್ಯಾಕಾಶ ಪ್ರಯೋಗಕ್ಕೆ ಮುಂದಾಗುತ್ತಿದೆ. ಅದರಲ್ಲೂ ಈ ಬಾರಿ ಭೂಮಿಯ ಮೇಲಿನ ಕೆಲವು ಜೀವಿಗಳನ್ನೇ ಕಳುಹಿಸುತ್ತಿದ್ದು, ಅವು ಬಾಹ್ಯಾಕಾಶದಲ್ಲಿ ಜೀವಿಸಬುದೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರನ್ನೊಳಗೊಂಡ ಆಕ್ಸಿಯಮ್ -4 ಕಾರ್ಯಾಚರಣೆಯಲ್ಲಿ ಟಾರ್ಡಿಗ್ರೇಡ್ ಎಂಬ ಜೀವಿಗಳನ್ನು ಕೊಂಡುಹೊಗಲಾಗುತ್ತಿದೆ.
ನೀರಿನ ಕರಡಿಗಳು ಎಂದೂ ಕರೆಯಲ್ಪಡುವ ಈ ಜೀವಿಗಳು 14 ದಿನಗಳ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ. ಅವುಗಳನ್ನು ಗುರುತ್ವಾಕರ್ಷಣೆಯ ಪ್ರಯೋಗಗಳಲ್ಲಿ ಬಳಸಲಾಗುತ್ತಿದೆ.
ಏನಿದು ನೀರಿನ ಕರಡಿಗಳು?
"ನೀರಿನ ಕರಡಿಗಳು" ಅಥವಾ "ಪಾಚಿ ಹಂದಿಮರಿಗಳು" ಎಂಬ ಅಡ್ಡಹೆಸರು ಹೊಂದಿರುವ ಟಾರ್ಡಿಗ್ರೇಡ್‌ಗಳು ಸಣ್ಣ, ಎಂಟು ಕಾಲಿನ ಸೂಕ್ಷ್ಮ ಪ್ರಾಣಿಗಳಾಗಿವೆ. ಕೇವಲ 0.3 ಮಿಮೀ ನಿಂದ 0.5 ಮಿಮೀ ಉದ್ದ ಬೆಳೆಯುವ ಅವುಗಳನ್ನು ಸೂಕ್ಷ್ಮದರ್ಶಕದ ಮೂಲಕ ನೋಡಬಹುದು. 1773 ರಲ್ಲಿ ಪತ್ತೆಯಾದ ಈ ಜೀವಿಗಳು ಬಾಹ್ಯಾಕಾಶದ ನಿರ್ವಾತ, ತೀವ್ರವಾದ ಕಾಸ್ಮಿಕ್ ವಿಕಿರಣ, ತೀವ್ರ ಶಾಖ ಮತ್ತು ಶೀತ, ಒತ್ತಡ, ನಿರ್ಜಲೀಕರಣ ಸ್ಥಿತಿಯಲ್ಲೂ ಬದುಕಬಲ್ಲದು ಎನ್ನಲಾಗಿದೆ. ಇವು ಪರ್ವತದ ತುದಿಗಳಿಂದ ಹಿಡಿದು ಸಾಗರದ ತಳದವರೆಗೂ ಕಂಡುಬರುವ ಸ್ಥಿತಿಸ್ಥಾಪಕ ಜೀವಿಗಳಾಗಿವೆ. ಇವು ಜಗತ್ತಿನ ಯಾವುದೇ ಸ್ಥಿತಿಯಲ್ಲೂ ಬದುಕುಳಿಯಬಲ್ಲವು ಎನ್ನಲಾಗಿದೆ.
ಟಾರ್ಡಿಗ್ರೇಡ್‌ಗಳನ್ನು ಅವುಗಳ ಅಸಾಧಾರಣ ಬದುಕುಳಿಯುವ ಕಾರ್ಯವಿಧಾನಗಳಿಂದಾಗಿ ಬಾಹ್ಯಾಕಾಶ ಸಂಶೋಧನೆಗೆ ಕಳುಹಿಸಲಾಗುತ್ತಿದೆ. ಈ ಸೂಕ್ಷ್ಮ ಜೀವಿಗಳು ಹಾನಿಯಾದರೂ ನಂತರ ಡಿಎನ್‌ಎಯನ್ನು ಸರಿಪಡಿಸಬಹುದು. "ಟ್ಯೂನ್" ಸ್ಥಿತಿ ಎಂದು ಕರೆಯಲ್ಪಡುವ ಸಂಪೂರ್ಣ ನಿರ್ಜಲೀಕರಣದಿಂದಲೂ ಇವು ಬದುಕುಳಿಯಬಹುದು ಮತ್ತು ಕಾಸ್ಮಿಕ್ ವಿಕಿರಣದ ತೀವ್ರ ಮಟ್ಟವನ್ನು ತಡೆದುಕೊಳ್ಳಬಹುದು ಎನ್ನಲಾಗಿದೆ.