ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದ್ವೀಪ ರಾಷ್ಟ್ರ ಶ್ರೀಲಂಕಾದ ಅತ್ಯುನ್ನತ ನಾಗರಿಕ ಗೌರವ 'ಮಿತ್ರ ವಿಭೂಷಣ' ಪ್ರಶಸ್ತಿಯನ್ನು ಶನಿವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಅನುರಾ ಕುಮಾರ ಡಿಸ್ಸನಾಯಕೆ ಪ್ರದಾನ ಮಾಡಿದರು.
ಪ್ರಶಸ್ತಿಯು ರಜತ ಪದಕ ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ.
ಶ್ರೀಲಂಕಾದ ಒಂಬತ್ತು ಬಗೆಯ ರತ್ನಗಳಿಂದ ಅಲಂಕೃತ ಈ ಪದಕವು ಕಮಲ, ಭೂಮಿ, ಸೂರ್ಯ, ಚಂದ್ರ ಹಾಗೂ ಭತ್ತದ ತೆನೆಗಳ ಸೂಡಿನ ಚಿಹ್ನೆಗಳನ್ನು ಒಳಗೊಂಡಿದೆ.
ಭಾರತ ಮತ್ತು ಶ್ರೀಲಂಕಾದ ಸಾಂಸ್ಕೃತಿಕ ಮೌಲ್ಯಗಳನ್ನು ಬೆಸೆದಿರುವ ಬೌದ್ಧ ಪರಂಪರೆ ಪ್ರತಿಬಿಂಬಿಸುವ ಧರ್ಮ ಚಕ್ರವೂ ಪದಕದಲ್ಲಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ,'ಶ್ರೀಲಂಕಾ ಅಧ್ಯಕ್ಷ ಡಿಸ್ಸನಾಯಕೆ ಅವರಿಂದ 'ಮಿತ್ರ ವಿಭೂಷಣ' ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂತಸ ತಂದಿದೆ. ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ' ಎಂದರು.
ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಶ್ರಮಿಸಿದ್ದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಮಹಿಂದ ರಾಜಪಕ್ಸ ಅವರು 2008ರಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್, ಪ್ಯಾಲೇಸ್ಟೀನ್ ನಾಯಕ, ದಿವಂಗತ ಯಾಸರ್ ಅರಾಫತ್ ಅವರು ಈ ಗೌರವಕ್ಕೆ ಪಾತ್ರರಾಗಿರುವ ಪ್ರಮುಖರು.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆದ 'ಬಿಮ್‌ಸ್ಟೆಕ್' ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ, ನಂತರ ಇಲ್ಲಿಗೆ ಬಂದಿಳಿದ್ದಾರೆ.
'ಇಂಡಿಪೆಂಡೆನ್ಸ್ ಸ್ಕ್ವೇರ್'ನಲ್ಲಿ ಭವ್ಯ ಸ್ವಾಗತ
ರಾಜಧಾನಿ ಕೋಲಂಬೊ ಹೃದಯಭಾಗದಲ್ಲಿರುವ ಐತಿಹಾಸಿಕ 'ಇಂಡಿಪೆಂಡೆನ್ಸ್ ಸ್ಕ್ವೇರ್'ನಲ್ಲಿ (ಸ್ವಾತಂತ್ರ್ಯ ಚೌಕ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾದ ಮೂರು ಪಡೆಗಳು ಭವ್ಯ ಸ್ವಾಗತ ಕೋರಿದವು. ವಿದೇಶಿ ಗಣ್ಯರೊಬ್ಬರಿಗೆ ಇದೇ ಮೊದಲ ಬಾರಿಗೆ ಈ ಸ್ಥಳದಲ್ಲಿ ಇಂತಹ ಭವ್ಯ ಸ್ವಾಗತ ಕೋರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧ್ಯಕ್ಷ ಅನುರಾ ಕುಮಾರ ಡಿಸ್ಸೆನಾಯಕೆ ಅವರು 'ಇಂಡಿಪೆಂಡೆನ್ಸ್ ಸ್ಕ್ವೇರ್'ನಲ್ಲಿ ಮೋದಿ ಅವರನ್ನು ಬರಮಾಡಿಕೊಂಡರು.
'ಉಭಯ ನಾಯಕರು ನಡೆಸುವ ಮಾತುಕತೆಗಳು ಎರಡು ದೇಶಗಳ ಜನರ ಏಳಿಗೆ ಹಾಗೂ ಪಾಲುದಾರಿಕೆ ವೃದ್ಧಿಗೆ ಇಂಬು ನೀಡಲಿವೆ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.