ನವದೆಹಲಿ: 'ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಹೆಸರನ್ನು ಜಾರಿ ನಿರ್ದೇಶನಾಲಯವು ಆರೋಪಪಟ್ಟಿಗೆ ಸೇರಿಸಿರುವುದು ರಾಜಕೀಯ ಸೇಡಿನ ಕ್ರಮವಾಗಿದೆ' ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯ 24 ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕೇಂದ್ರ ಕಚೇರಿ ಎದುರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, 'ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜಿಂದಾಬಾದ್, ಸರ್ವಾಧಿಕಾರ ನಡೆಯಲ್ಲ, ಮೋದಿ-ಶಾ ಉತ್ತರ ಕೊಡಿ' ಎಂದು ಘೋಷಣೆ ಕೂಗಿದರು. 'ಹೆದರಬೇಡಿ, ಇಡೀ ದೇಶವೇ ನಿಮ್ಮೊಂದಿಗಿದೆ' ಎಂಬ ಫಲಕಗಳನ್ನು ಪ್ರದರ್ಶಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರು, ಸಂಸದರು, ಕಾರ್ಯಕರ್ತರು, ಪಕ್ಷದ ವಿವಿಧ ಘಟಕಗಳ ಸದಸ್ಯರು, ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು, ಎನ್‌ಎಸ್‌ಯುಐ ಸದಸ್ಯರು ಪಾಲ್ಗೊಂಡಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದರ್ ಯಾದವ್ ಒಳಗೊಂಡಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಹಣ ಅಕ್ರಮ ವರ್ಗಾವಣೆಯಲ್ಲಿ ನ್ಯಾಷನಲ್ ಹೆರಾಲ್ಡ್ ಪಾತ್ರ ಕುರಿತು ಏ. 9ರಂದು ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಸೋನಿಯಾ ಮತ್ತು ರಾಹುಲ್ ಜತೆಗೆ ಪಕ್ಷದ ಸಾಗರೋತ್ತರ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ಮತ್ತು ಸುಮನ್ ದುಬೆ ಹೆಸರು ಕೂಡಾ ಸೇರಿಸಲಾಗಿದೆ.
ನ್ಯಾಷನಲ್ ಹೆರಾಲ್ಡ್‌ನ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅಕ್ರಮವಾಗಿ ₹2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಖರೀದಿಸಿ ನಂತರ ಯಂಗ್ ಇಂಡಿಯಾಗೆ ವರ್ಗಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2014ರಲ್ಲಿ ದೂರು ನೀಡಿದ್ದರು. ಈ ಎರಡೂ ಸಂಸ್ಥೆಗಳಲ್ಲಿ ಸೋನಿಯಾ ಮತ್ತು ರಾಹುಲ್ ತಲಾ ಶೇ 38ರಷ್ಟು ಪಾಲು ಹೊಂದಿದ್ದಾರೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇಥ್ ಮಾತನಾಡಿ, 'ಇದೊಂದು ರಾಜಕೀಯ ಸೇಡಿನ ಕ್ರಮವಾಗಿದೆ. 12 ವರ್ಷಗಳ ಹಿಂದಿನ ಪ್ರಕರಣವಿದು. ಒಂದು ನಯಾ ಪೈಸೆಯೂ ವರ್ಗಾವಣೆಗೊಂಡಿಲ್ಲ. ಹೀಗಿದ್ದರೂ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅನ್ನು ಕೇಂದ್ರ ಸರ್ಕಾರ ಗುರಿಯಾಗಿಸಿದೆ. ರಾಹುಲ್ ಗಾಂಧಿ ಕುರಿತು ಇವರಲ್ಲಿ ಭಯ ಮೂಡಿರುವುದೇ ಇವೆಲ್ಲದಕ್ಕೂ ಕಾರಣ' ಎಂದಿದ್ದಾರೆ.
ಸಂಸದ ಇಮ್ರಾನ್ ಪ್ರತಾಪ್‌ಗಢಿ ಮಾತನಾಡಿ, 'ಪ್ರಕರಣ ಸಾಗಿ ಬಂದಿರುವುದನ್ನು ಗಮನಿಸಬೇಕು. ಬಹುಮತ ಕಳೆದುಕೊಳ್ಳುತ್ತಿರುವ ಭೀತಿ ಬಿಜೆಪಿಯದ್ದಾಗಿದೆ. ಲೋಕಸಭೆಯಲ್ಲಿ ಅವರ ಸ್ಥಾನ 400ರಿಂದ 240ಕ್ಕೆ ಕುಸಿದಿದೆ. ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಹಿಂದಕ್ಕೆ ಸರಿದರೆ ಸರ್ಕಾರವೇ ಪತನವಾಗಲಿದೆ' ಎಂದರು.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಮಾತನಾಡಿ, 'ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಯಾವುದೇ ಸಾಕ್ಷಿಗಳಿಲ್ಲದೆ ಕಳೆದ ಹತ್ತು ವರ್ಷಗಳಿಂದ ಈ ಪ್ರಕರಣವನ್ನು ಎಳೆಯಲಾಗುತ್ತಿದೆ. ಬಲವಾದ ಸಾಕ್ಷಿಯನ್ನು ಪ್ರಸ್ತುಪತಪಡಿಸಲು ಸರ್ಕಾರ ವಿಫಲವಾಗಿದೆ. ಹೀಗಿದ್ದರೂ, ನಮ್ಮ ನಾಯಕತ್ವವನ್ನು ಗುರಿಯಾಗಿಸಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಜೆಎಲ್‌ಗೆ ಸೇರಿದ ₹661 ಕೋಟಿ ಮೌಲ್ಯದ ಸ್ಥಿರಾಸ್ತಿಯ ಜಪ್ತಿಗೆ ಜಾರಿ ನಿರ್ದೇಶನಾಲಯವು ಏ. 11ರಂದು ಮುಂದಾಯಿತು. ಆಸ್ತಿಗಳನ್ನು ಸುಪರ್ದಿಗೆ ತೆಗೆದುಕೊಳ್ಳುವಂತೆ ದೆಹಲಿ, ಮುಂಬೈ ಮತ್ತು ಲಖನೌದಲ್ಲಿರುವ ಆಸ್ತಿ ನೋಂದಣಾಧಿಕಾರಿಗಳಿಗೆ ಇಡಿ ನೋಟಿಸ್ ಜಾರಿ ಮಾಡಿದೆ.
ಅಲ್ಕಾ ಲಾಂಬಾ ಮಾತನಾಡಿ, 'ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಮುಖ ಪಾತ್ರ ವಹಿಸಿತ್ತು. ಇಂಥ ಇತಿಹಾಸ ಹೊಂದಿರುವ ಸಂಸ್ಥೆ ಹಾಗೂ ಅದರ ಹಿಂದಿರುವ ವ್ಯಕ್ತಿಗಳ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡಲು ಕೇಂದ್ರ ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ' ಎಂದರು.
ಇದೇ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಅವರು 2015ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಪ್ರಕರಣವನ್ನು ಕೈಬಿಡಲು ನಿರಾಕರಿಸಿವೆ. ಕಾನೂನು ಪ್ರಕ್ರಿಯೆಗಿಂತಲೂ, ರಾಜಕೀಯ ದೃಷ್ಟಿಕೋನದಿಂದ ಕಾಂಗ್ರೆಸ್ ತನ್ನ ಹೋರಾಟ ಮುಂದುವರಿಸಿದೆ.